7 ಕೋಟಿಯ ಬಜೆಟ್ ‘ಕಾಂತಾರ’ ಚಿತ್ರಕ್ಕೆ ದುಪ್ಪಟ್ಟು ಖರ್ಚಾಗಿದ್ದು ಯಾಕೆ ಗೊತ್ತಾ.? : ಲೆಕ್ಕ ಕೊಟ್ಟ ರಿಷಬ್ ಶೆಟ್ಟಿ ತಂದೆ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಬ್ಲಾಕ್ ಬಸ್ಟರ್ ಚಿತ್ರ ‘ಕಾಂತಾರ’ ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಕನ್ನಡದಲ್ಲಿ ಬಿಡುಗಡೆಗೊಂಡು ಅಬ್ಬರಿಸಿದ್ದ ‘ಕಾಂತಾರ’ ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಯ್ತು. ಇದೀಗ ಸದ್ಯ ‘ಕಾಂತಾರ’ ಸಿನಿಮಾ ನಾಲ್ಕುನೂರು ಕೋಟಿ ಕ್ಲಬ್ ಸೇರಿ ಐದುನೂರು ಕೋಟಿಯತ್ತ ಹೆಜ್ಜೆ ಹಾಕಿದೆ.

‘ಕಾಂತಾರ ಸಿನಿಮಾಗೆ ಇನ್ನೂ ಸಹ ಯಾವ ರೀತಿಯ ಪ್ರತಿಕ್ರಿಯೆ ಇದೆ ಅಂದ್ರೆ, ಹಲವಾರು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲಿಯೂ ತೆಲುಗು ಸಿನಿ ಪ್ರೇಕ್ಷಕರು ‘ಕಾಂತಾರ’ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ತಮ್ಮ ಚಿತ್ರದಂತೆ ಒಪ್ಪಿಕೊಂಡಿದ್ದು, ಇದು ಕನ್ನಡ ಚಿತ್ರರಂಗದ ಮತ್ತೊಂದು ‘ಮಾಸ್ಟರ್ ಪೀಸ್’ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ.

ಹೀಗೆ ಕೋಟ್ಯಾಂತರ ರೂಪಾಯಿ ಬಾಚುತ್ತಿರುವ ‘ಕಾಂತಾರ’ ಸಿನಿಮಾದ ಬಜೆಟ್ ಎಷ್ಟು ಎನ್ನುವ ವಿಚಾರವನ್ನು ಮಾತ್ರ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಇಲ್ಲಿಯವರೆಗೂ ಬಿಟ್ಟುಕೊಟ್ಟಿಲ್ಲ. ಈ ಸಿನಿಮಾ ಮಾತ್ರವಲ್ಲದೇ, ಹೊಂಬಾಳೆ ಫಿಲ್ಮ್ಸ್ ಇಲ್ಲಿಯವರೆಗೂ ನಿರ್ಮಿಸಿರುವಂತಹ ಯಾವುದೇ ಸಿನಿಮಾದ ಬಜೆಟ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದ್ರೆ ಸಿನಿಮಾಗೆ ಬೇಕಾದ ಹಣವನ್ನು ಹೂಡುವುದರಲ್ಲಿ ಮಾತ್ರ ಹೊಂಬಾಳೆ ಫಿಲಂಸ್ ಇದುವರೆಗೂ ರಾಜಿಯಾಗಿಲ್ಲ. ‘ಕಾಂತಾರ’ ಚಿತ್ರಕ್ಕೂ ಸಹ ಹೊಂಬಾಳೆ ಫಿಲ್ಮ್ಸ್ ಇದೇ ರೀತಿಯ ಬೆಂಬಲ ನೀಡಿದ್ದೂ 7 ಕೋಟಿಯ ಬಜೆಟ್ ಎಂದು ಪ್ರಾರಂಭವಾದ ಸಿನಿಮಾಗೆ ನಿಖರವಾಗಿ ಎಷ್ಟೆಲ್ಲಾ ಖರ್ಚಾಯಿತು ಎನ್ನುವ ಮಾಹಿತಿಯನ್ನು ರಿಷಬ್ ಶೆಟ್ಟಿ ಯವರ ತಂದೆ ಭಾಸ್ಕರ್ ಶೆಟ್ಟಿಯವರು ಬಿಚ್ಚಿಟ್ಟಿದ್ದಾರೆ.

‘ಕಾಂತಾರ’ ಸಿನಿಮಾದ ಬಜೆಟ್ ರಿವೀಲ್

‘ಕಾಂತಾರ’ ಸಿನಿಮಾದ ಬಜೆಟ್ ಕುರಿತು ಮುಕ್ತ ಮನಸ್ಸಿನಿಂದ ಮಾತನಾಡಿರುವ ರಿಷಬ್ ತಂದೆ ಭಾಸ್ಕರ್ ಶೆಟ್ಟಿಯವರು, ಸುಮಾರು 7 ಕೋಟಿ ವೆಚ್ಚದಲ್ಲಿ ಮುಗಿಯಬೇಕಿದ್ದ ಸಿನಿಮಾಗೆ 16 ಕೋಟಿ ಖರ್ಚಾಯಿತು ಎಂದರು. ಇನ್ನು ಬಜೆಟ್ ಅಲ್ಲಿ ಇಷ್ಟೊಂದು ಬೃಹತ್ ವ್ಯತ್ಯಾಸವಾಗಲು ಕಾರಣವನ್ನೂ ಸಹ ಭಾಸ್ಕರ್ ಶೆಟ್ಟಿಯವರೇ ಬಿಚ್ಚಿಟ್ಟಿದ್ದಾರೆ. ಸಿನಿಮಾದ ಚಿತ್ರೀಕರಣಕ್ಕಾಗಿ ಹಾಕಿದ್ದ ಮಣ್ಣೆಲ್ಲಾ ಕರಗಿಹೋಗಿತ್ತು, ಅದಕ್ಕಾಗಿ ನಿರ್ಮಿಸಿದ್ದ ರಸ್ತೆಯೇ ನಾಪತ್ತೆಯಾಗಿ ಕೆಸರಾಗಿತ್ತು, ಅದಕ್ಕೆ ಜಲ್ಲಿ ಹಾಕಬೇಕಿತ್ತು, ಅಷ್ಟೇ ಅಲ್ಲದೇ ಸುಮಾರು ಆರು ತಿಂಗಳ ಕಾಲ ಮಳೆ ಸುರಿದು ಸಿನಿಮಾ ಚಿತ್ರೀಕರಣಕ್ಕೆ ಅಡ್ಡಿಯಾಗಿತ್ತು. ಚಿತ್ರೀಕರಣಕ್ಕಾಗಿ ಬಳಸಿದಂತಹ ಸಾಮಗ್ರಿಗಳು ಕಾಣೆಯಾಗಿದ್ದವು. ಈ ಎಲ್ಲಾ ಕಾರಣಗಳಿಂದ ಸಿನಿಮಾದ ಬಜೆಟ್ ಏರಿಕೆಯಾಗಿತ್ತು ಎನ್ನುವ ಮಾಹಿತಿಯನ್ನು ಭಾಸ್ಕರ್ ಶೆಟ್ಟಿಯವರು ನ್ಯೂಸ್ ಫಸ್ಟ್ ಚಾನೆಲ್ ಜತೆ ಸಂದರ್ಶನದಲ್ಲಿ ನೀಡಿದ್ದರು.

ಒಳ್ಳೆಯ ಕಲೆಕ್ಷನ್ನತ್ತ ಮುಖ ಮಾಡಿದ ಸಿನಿಮಾ

ಊಹಿಸಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿಸಿದ ‘ಕಾಂತಾರ’ ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿದೆ ಎನ್ನುವ ಮಾಹಿತಿಯನ್ನು ಸಹ ಭಾಸ್ಕರ್ ಶೆಟ್ಟಿಯವರು ನೀಡಿದ್ದಾರೆ. ಸಿನಿಮಾ ಚೆನ್ನಾಗಿ ಓಡುತ್ತೆ, ಹಾಕಿದ ಹಣವೆಲ್ಲಾ ವಾಪಾಸ್ ಬಂದೇ ಬರುತ್ತೆ ಎಂದು ನಾನು ಹೇಳಿದ್ದೆ, ಆದ್ರೆ ಈ ಮಟ್ಟಕ್ಕೆ ದೇಶಾದ್ಯಂತ ಸದ್ದು ಮಾಡುತ್ತೆ ಅಂದುಕೊಂಡಿರಲಿಲ್ಲ ಎಂದು ಭಾಸ್ಕರ್ ಶೆಟ್ಟಿಯವರು ಹೇಳಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ರಾಜಸ್ತಾನ್, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿರುವುದರ ಬಗ್ಗೆ ರಿಷಬ್ ತಂದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಂಬಿಎ ಮಾಡೋಕೆ ಎರೆಡೆರಡು ಬಾರಿ ಪೀಸ್ ಕಟ್ಟಿದ್ದೆ

ಇನ್ನು ರಿಷಬ್ ಶೆಟ್ಟಿಯವರ ಬಾಲ್ಯ ಹಾಗು ವಿದ್ಯಾಭ್ಯಾಸದ ಕುರಿತು ಮಾತನಾಡಿದ ಭಾಸ್ಕರ್ ಶೆಟ್ಟಿಯವರು, ರಿಷಬ್ ಗೆ ಎಂಬಿಎ ಮಾಡಲಿಕ್ಕೆ ಎರಡು ಬಾರಿ ಫೀಸ್ ಕಟ್ಟಿದ್ದೆ, ಆದ್ರೆ ಆತ ಎರಡೂ ಬಾರಿಯೂ ಎಂಬಿಎ ಪೂರ್ತಿ ಮಾಡಲೇ ಇಲ್ಲವೆಂದು ನಕ್ಕರು. ಹಾಗೇ ಆತನ ಹೆಸರು ಪ್ರಶಾಂತ್, ರಿಷಬ್ ಅಲ್ಲ ಎನ್ನುವ ವಿಚಾರವನ್ನೂ ಸಹ ರಿಷಬ್ ತಂದೆ ತಿಳಿಸಿದ್ದಾರೆ. ಸಿನಿಮಾರಂಗ ಪ್ರವೇಶಿಸಿದ ನಂತರ ಪ್ರಶಾಂತ್ ಹೆಸರನ್ನು ಸಂಖ್ಯಾಶಾಸ್ತ್ರದ ಪ್ರಕಾರ ಬದಲಿಸಲಾಯಿತು ಎಂದು ತಿಳಿಸಿದರು.

‘ದೇವರೇ ರಿಷಬ್‌ ಕೈಯಲ್ಲಿ ಇಂಥ ಅದ್ಭುತ ಸಿನಿಮಾ ಮಾಡಿಸಿದ್ದಾರೆ’; ‘ಕಾಂತಾರ’ ಚಿತ್ರಕ್ಕೆ ಜಗ್ಗೇಶ್‌ ಹೊಗಳಿಕೆಯ ಸುರಿಮಳೆ

ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು ಕಾರಣ ನನ್ನ ಬದುಕಿಗೆ ಸಕಲವು ನೀಡಿದ ನನ್ನ ತಾಯಿ ಕನ್ನಡ ಚಿತ್ರರಂಗ..ಬಾಲ್ಯದಿಂದ ಕನ್ನಡ ಹಾಗು ರಾಜಣ್ಣನ ಹುಚ್ಚು ಅಭಿಮಾನಿಯಾದ ನಾನು ಕರುನಾಡ ದಾಟಿ ಹೊರಹೋಗದೆ ಬದುಕಿದವನು..ಸದಾ ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಹಂಬಲಿಸುವ ಜನ್ಮ ನನ್ನದು..
ಇತ್ತೀಚಿನ ಚಿತ್ರ ಕಾಂತಾರ ವಿದೇಶಕ್ಕೆ ಬಂದ ಕಾರಣ ನೋಡಲಾಗಲಿಲ್ಲಾ ಆದರೆ ನನ್ನ ಅಕ್ಕನ ಮಗ #ಜೀವನ್ ಹಾಗು ನನ್ನ ಅನೇಕ ಚಿತ್ರ #ಗುರು #ಮೇಲುಕೋಟೆಮಂಜ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದನು
ಇಂದು ಅಮೇರಿಕದ ಡೆನ್ವರ್ ನಲ್ಲಿ #ಒರ್ಯಾಕಲ್ ಸಂಸ್ಥೆಯಲ್ಲೆ ಶ್ರೇಷ್ಠ ಸ್ಥಾನದಲ್ಲಿರುವ ಅವನ ಮನೆ ಹತ್ತಿರದಲ್ಲೆ ಮಾಲ್ ಇತ್ತು ಅಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು ನೋಡಿ ಬಂದೆ..


ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ ವರ್ಷಕ್ಕೆ ಒಂದು ಬಾರಿ ಪೊಳಲಿ ,ಕಟೀಲು, ಉಡುಪಿಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30ವರ್ಷದ ಅಭ್ಯಾಸ ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ.. ಆಧ್ಯಾತ್ಮಿಕ ಅನುಭವಕ್ಕೆ ಈ ಕ್ಷೇತ್ರದಲ್ಲಿ ಸಂತೃಪ್ತ ಭಾವ ಸಿಗುತ್ತದೆ..ಇಂಥ ನಾಡಿನಿಂದ ಎಂಥ ಅದ್ಭುತ ನಟ ನಿರ್ದೇಶಕ #ರಿಷಭ್ ಶೆಟ್ಟಿ ಹುಟ್ಟಿಬಂದ ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ..ಕಾಂತಾರ ಕಡೆಯ 25ನಿಮಿಷ ನಾನು ಎಲ್ಲಿರುವೆ ಮರೆತು ಹೋಯಿತು

ಚಿತ್ರ ನೋಡಿದ ಮೇಲೆ ಮೌನವಾಯಿತು ದೇಹ ಮನಸ್ಸು ಹೊರಬಂದಾಗ ಕಾಕತಾಳಿಯ ಎಂಬಂತೆ ಮಂತ್ರಾಲಯ ನರಸಿಂಹಚಾರ್ ವಾಟ್ಸ್ಯಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು ಮೂಕವಿಸ್ಮಿತನಾದೆ ..ನಂತರ ನನಗೆ ಅನ್ನಿಸಿದ್ದು ಇದು ರಿಷಬ್ ಮಾಡಿದ ಚಿತ್ರವಲ್ಲಾ ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮ ಮಾಡಿಸಿದ್ದಾರೆ..ದೇವರ ದಯೆಯಿಂದ ರಿಷಭನಿಗೆ ನೂರ್ಕಾಲ ಆಯುಷ್ಯ ಆರೋಗ್ಯ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ..
ಕಾಂತಾರ ಸಿನಿಮ ಅಲ್ಲಾ ರೋಮಾಂಚನ ಅನುಭವ…god bless entire team
ಶುಭರಾತ್ರಿ..

Leave a Reply