ದೇವರಿಗೆ ನೈವೇದ್ಯವಾಗಿ ಭಕ್ತರು, ಹೂ, ಹಣ್ಣು, ಆಹಾರ ಪದಾರ್ಥ ನೀಡುವುದನ್ನು ನಾವೆಲ್ಲಾ ಸಾಮಾನ್ಯವಾಗಿ ನೋಡಿದ್ದೇವೆ.ಆದರೆ ಈ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನೇ ನೈವೇದ್ಯ ಮಾಡಲಾಗುತ್ತದೆ. ಜೊತೆಗೆ ಇಲ್ಲಿಗೆ ಆಗಮಿಸುವ ಭಕ್ತರು ಸಹ ಮದ್ಯ ಸೇವನೆ ಮಾಡುತ್ತಾರೆ.
ಶಿವರಾತ್ರಿ ಬಳಿಕ ನಡೆಯುವ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಹೂ, ಹಣ್ಣಿನ ಬದಲು ದೇವರಿಗೆ ಎಣ್ಣೆಯನ್ನು ಸಮರ್ಪಿಸಲಾಗುತ್ತದೆ. ಹೀಗಾಗಿ, ಈ ಜಾತ್ರೆಯನ್ನು ಸಾರಾಯಿ ಜಾತ್ರೆ ಎಂದೇ ಕರೆಯಲಾಗುತ್ತದೆ. ಮಹಿಳೆಯರು ಕೂಡಾ ಇದನ್ನೇ ನೈವೇದ್ಯವಾಗಿ ಸ್ವೀಕರಿಸಿತ್ತಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ಬಬಲಾದಿ ಸದಾಶಿವನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಈ ವೇಳೆ ದೇವರಿಗೆ ಮದ್ಯವನ್ನೇ ನೈವೇದ್ಯವಾಗಿ ಆರ್ಪಿಸಿ ಭಕ್ತರು ಭಕ್ತಿಯನ್ನು ಮೆರೆಯುತ್ತಿದ್ದಾರೆ.ಯಾವುದಾದ್ರು ಹರಕೆ ಕಟ್ಟಿಕೊಂಡ ಮಹಿಳಾ ಹಾಗೂ ಪುರುಷ ಭಕ್ತರು ಅದು ಈಡೇರಿದ ಬಳಿಕ ತಮ್ಮ ಹರಕೆಯಂತೆ ವಿವಿಧ ಬ್ರ್ಯಾಂಡ್ಗಳ ಮದ್ಯವನ್ನ ದೇವರಿಗೆ ಸಮರ್ಪಿಸುತ್ತಾರೆ.
ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಹೇಳಲಾಗುವ ಕಾರ್ಣಿಕ ಯಾವತ್ತೂ ಸುಳ್ಳಾಗಿಯೇ ಇಲ್ಲ. ನೂರಾರು ವರ್ಷಗಳಿಂದ ಇಲ್ಲಿ ಹೇಳುವ ಕಾಲಜ್ಞಾನದ ಹೇಳಿಕೆಗಳು ಸತ್ಯವಾಗುತ್ತಲೇ ಬಂದಿವೆ.
ಜಾತ್ರೆ ವೇಳೆ ದೇವಸ್ಥಾನದ ಆವರಣದಲ್ಲಿ ಪ್ರತಿ ರೈತನಿಗೂ ಬೊಗಸೆಯಷ್ಟು ಧವಸ-ಧಾನ್ಯಗಳನ್ನು ನೀಡಲಾಗುತ್ತದೆ. ಈ ಧಾನ್ಯವನ್ನು ರೈತರು ತಾವು ಬಿತ್ತನೆ ಮಾಡುವ ಬೀಜದೊಂದಿಗೆ ಸೇರಿಸಿ ಹಾಕಿದ್ರೆ ಆ ವರ್ಷದ ಬೆಳೆ ಭರ್ಜರಿಯಾಗಿ ಬರುತ್ತದಂತೆ.