ಸಿ.ಎಂ. ಕಟ್ಟಿಹಾಕಲು ಕಾಂಗ್ರೆಸ್ ನಲ್ಲೇ ರಣತಂತ್ರ..?

ಮುಂದಿನ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದೆ. ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ರಾಜ್ಯದಲ್ಲಿ 3 ಹಂತದ ಜನಾಶೀರ್ವಾದ ಯಾತ್ರೆ ಕೈಗೊಂಡು ಪಕ್ಷದಲ್ಲಿ ಸಂಚಲನ ಮೂಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ 7 ಮಂದಿಯನ್ನು ಹೊರತುಪಡಿಸಿ, ಹಾಲಿ ಎಲ್ಲಾ ಶಾಸಕರಿಗೂ ಟಿಕೆಟ್ ಕೊಡಬೇಕು. ಸಚಿವರ ಮಕ್ಕಳಿಗೂ ಟಿಕೆಟ್ ನೀಡಬೇಕೆಂದು ರಾಹುಲ್ ಗಾಂಧಿಯವರಿಗೆ ಸಂದೇಶ ರವಾನಿಸಿದ್ದಾರೆ. ಪಕ್ಷ ಮತ್ತೆ ಅಧಿಕಾರಕ್ಕೆ ತರಲು ತಮ್ಮ ಸಲಹೆ ಪರಿಗಣಿಸುವಂತೆ ಸಿ.ಎಂ. ತಿಳಿಸಿದ್ದಾರೆನ್ನಲಾಗಿದೆ.
ತಾವು ಹೇಳಿದವರಿಗೆ ಟಿಕೆಟ್ ಕೊಡುವಂತೆ ಸಿ.ಎಂ. ತಿಳಿಸಿರುವುದು ಕಾಂಗ್ರೆಸ್ ವಲಯದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಸಿ.ಎಂ. ಹೇಳಿದವರಿಗೆ ಟಿಕೆಟ್ ಕೊಡದ ಕಾರಣ ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತೆ ಒಂದಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಅಧಿಕಾರವನ್ನು ಸಿ.ಎಂ.ಗೆ ನೀಡದಿರಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಸಿ.ಎಂ. ಏಕಪಕ್ಷೀಯ ನಿರ್ಧಾರದಿಂದ ಅಸಮಾಧಾನಗೊಂಡಿರುವ ಈ ನಾಯಕರು, ರಾಜ್ಯಸಭೆ ಚುನಾವಣೆಯಲ್ಲಿ ಅನುಸರಿಸಿದ ಮಾದರಿಯನ್ನೇ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲೂ ಅನುಸರಿಸುವ ಸಾಧ್ಯತೆ ಇದೆ. ಸಿ.ಎಂ., ಜಾತಿ ಗಣತಿ ಆಧರಿಸಿ ಸುಮಾರು 20 ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಸಿ.ಎಂ. ಮೇಲುಗೈ ಸಾಧಿಸದಂತೆ ವೇಣುಗೋಪಾಲ್ ಮತ್ತು ಪರಮೇಶ್ವರ್ ಜೋಡಿ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

Leave a Reply