ಮದುವೆಯಾಗಲು ಬಯಸಿದ್ದವನಿಗೆ ಮನೆಹಾಳ ಐಡಿಯಾ ಕೊಟ್ಟ ಮಾಂತ್ರಿಕ – ಕನ್ನಡ ನ್ಯೂಸ್

ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನಡು ವಯಸ್ಸು ಮೀರಿದರೂ ವಿವಾಹವಾಗುತ್ತಿಲ್ಲವೆಂಬ ಚಿಂತೆಯಲ್ಲಿದ್ದವನೊಬ್ಬ ಪರಿಹಾರಕ್ಕಾಗಿ ಮಾಂತ್ರಿಕನ ಮೊರೆ ಹೋದ ವೇಳೆ ಆತ ಮನೆಹಾಳು ಐಡಿಯಾ ಕೊಟ್ಟಿದ್ದು, ಇದರಿಂದ ವ್ಯಕ್ತಿಯ ಜೀವಕ್ಕೇ ಅಪಾಯವಾಗಿದೆ.

ಉತ್ತರ ಪ್ರದೇಶದ ಹಾರ್ದೊಯಿಯಲ್ಲಿ ಈ ಘಟನೆ ನಡೆದಿದ್ದು, ಬಿಲ್ಗ್ರಾಮದ ಅಜಯ್ ದ್ವಿವೇದಿ ಎಂಬಾತನಿಗೆ 42 ವರ್ಷಗಳಾಗಿದ್ದರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ತನಗೆ ಯಾರೋ ಮಾಟ ಮಾಡಿಸಿದ್ದಾರೆಂಬ ಭ್ರಮೆಯಲ್ಲಿ ಅಜಯ್ ದ್ವಿವೇದಿ ಈ ಸಮಸ್ಯೆಗೆ ಪರಿಹಾರ ಕೋರಿ ಮಾಂತ್ರಿಕನೊಬ್ಬನ ಮೊರೆ ಹೋಗಿದ್ದಾನೆ.

ಸಮಸ್ಯೆ ಪರಿಹಾರವಾಗಬೇಕೆಂದರೆ ನಾನು ಹೇಳಿದಂತೆ ಕೇಳಬೇಕೆಂಬ ಶರತ್ತನ್ನು ಮಾಂತ್ರಿಕ ಒಡ್ಡಿದ್ದು, ಇದಕ್ಕೆ ಅಜಯ್ ತಲೆಯಾಡಿಸಿದ್ದಾನೆ. ನಂತರ ಕೆಲ ಪೂಜೆ ಪುನಸ್ಕಾರ ನೆರವೇರಿಸಿದ ಮಾಂತ್ರಿಕ ಅದಾದ ಬಳಿಕ ಮುರಿದಿದ್ದ ಮೊಬೈಲ್ ಫೋನ್, ಬ್ಯಾಟರಿ, ವೈರ್, ಗ್ಲಾಸ್ ನುಂಗುವಂತೆ ಹೇಳಿದ್ದಾನೆ. ಮದುವೆಯಾಗುವ ಆತುರದಲ್ಲಿದ್ದ ಅಜಯ್ ದ್ವಿವೇದಿ, ಮಾಂತ್ರಿಕನ ಮಾತನ್ನು ಚಾಚೂ ತಪ್ಪದೆ ಪಾಲಿಸಿದ್ದಾನೆ.

ಕೆಲ ದಿನಗಳಲ್ಲೇ ಅಜಯ್ ದ್ವಿವೇದಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವಿಧಿಯಿಲ್ಲದೆ ವೈದ್ಯರ ಮೊರೆ ಹೋಗಿದ್ದಾನೆ. ಎಕ್ಸ್ ರೇ ಮಾಡಿದ ವೈದ್ಯರು ಹೊಟ್ಟೆಯೊಳಗಿದ್ದ ವಸ್ತುಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಅಜಯ್ ದ್ವಿವೇದಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಈ ವಸ್ತುಗಳನ್ನೆಲ್ಲಾ ಹೊರ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸುವುದು ಸ್ವಲ್ಪ ತಡವಾಗಿದ್ದರೂ ಆತನ ಜೀವಕ್ಕೆ ಅಪಾಯವಾಗುತ್ತಿತ್ತೆಂದು ವೈದ್ಯರು ಹೇಳಿದ್ದಾರೆ.

Leave a Reply