ಬಿ.ಜೆ.ಪಿ.ಗೆ ಬಿಗ್ ಶಾಕ್ ಕೊಡಲು ಮುಂದಾದ ಕಾಂಗ್ರೆಸ್…? – ಕರ್ನಾಟಕ ನ್ಯೂಸ್

ಅಸಮಾಧಾನದಿಂದ ಪಕ್ಷ ತೊರೆದ ಹಿರಿಯ ನಾಯಕರನ್ನು ವಾಪಸ್ ಕರೆತರಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಿ.ಜೆ.ಪಿ. ಸೇರಿದ್ದರೂ, ಅವರಿಗೆ ಸೂಕ್ತವಾದ ಸ್ಥಾನಮಾನ ನೀಡಿಲ್ಲ. ಪಕ್ಷದ ಚಟುವಟಿಕೆಗಳಿಂದ ಕೃಷ್ಣ ಅವರು ದೂರ ಉಳಿದಿದ್ದಾರೆ. ಸಭೆ, ಸಮಾರಂಭ, ಚುನಾವಣೆ ಕಾರ್ಯಗಳಿಂದ ಕೃಷ್ಣ ಅವರು ದೂರವಿದ್ದು, ಬಿ.ಜೆ.ಪಿ. ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕೃಷ್ಣ ಅವರ ಬೆಂಬಲಿಗರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾರೆ.

ಇನ್ನು ತಮ್ಮ ಪುತ್ರಿ ಶಾಂಭವಿ ಅವರಿಗೆ ಮಂಡ್ಯ ಜಿಲ್ಲೆಯ ಮದ್ದೂರು, ಅಥವಾ ಬೆಂಗಳೂರು ಕ್ಷೇತ್ರವೊಂದರಲ್ಲಿ ಟಿಕೆಟ್ ನೀಡುವಂತೆ ಕೃಷ್ಣ ಹೇಳಿದ್ದರೂ, ಬಿ.ಜೆ.ಪಿ. ಸ್ಪಂದಿಸಿಲ್ಲ. ಇದೆಲ್ಲಾ ಕಾರಣಗಳಿಂದ ಅಸಮಾಧಾನಗೊಂಡಿರುವ ಎಸ್.ಎಂ. ಕೃಷ್ಣ ಅವರನ್ನು ಮತ್ತೆ ಕಾಂಗ್ರೆಸ್ ಗೆ ಕರೆತರಲು ಪಕ್ಷದ ನಾಯಕರು ಮುಂದಾಗಿದ್ದಾರೆ.

ಈಗಾಗಲೇ ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾಹಿತಿ ನೀಡಿಯೇ ಎಸ್.ಎಂ. ಕೃಷ್ಣ ಅವರನ್ನು ಕಾಂಗ್ರೆಸ್ ಗೆ ಮರಳಿ ಕರೆತರಲು ಯೋಜಿಸಲಾಗಿದೆ. ಕೃಷ್ಣ ಅವರೂ ಕಾಂಗ್ರೆಸ್ ಸೇರಲು ಚಿಂತಿಸಿದ್ದಾರೆ ಎನ್ನಲಾಗಿದೆ. ಇದೇ ರೀತಿ ಕಾಂಗ್ರೆಸ್ ಪಕ್ಷದಿಂದ ದೂರವಾಗಿರುವ ಹಲವು ನಾಯಕರನ್ನು ಕರೆತರಲು ಪ್ಲಾನ್ ಮಾಡಲಾಗಿದೆ.

Leave a Reply