ರಾಜ್ಯಸಭೆ ಚುನಾವಣೆಗೆ ಮತದಾನ, ಮತ ಎಣಿಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.
ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆ ತಯಾರಿ ನಡೆಸಿದ್ದು, ಮುಂದಿನ ವಾರ ಚುನಾವಣೆ ಘೋಷಣೆಯಾಗಬಹುದೆಂದು ಹೇಳಲಾಗಿತ್ತು. ಕೇಂದ್ರ ಚುನಾವಣಾ ಆಯೋಗ ಮೇ 5 ಅಥವಾ 7 ರಂದು ಚುನಾವಣೆ ನಡೆಸಲಿದ್ದು, ಮೇ 8 ಅಥವಾ 10 ರಂದು ಮತ ಎಣಿಕೆಗೆ ಸಿದ್ಧತೆ ಮಾಡಿಕೊಂಡಿದೆ.
ಇಂದು ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಯೋಗ ದಿನಾಂಕವನ್ನು ಘೋಷಣೆ ಮಾಡಬಹುದೆಂದು ಹೇಳಲಾಗಿದೆ.
ರಾಜ್ಯ ಸರ್ಕಾರ ಕೂಡ ಕೊನೆ ಹಂತದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದೆ. ಕ್ಯಾಬಿನೆಟ್ ಸಭೆ ಕೂಡ ಕರೆಯಲಾಗಿದೆ. ವಿಧಾನಸಭೆ ಚುನಾವಣೆಗೆ ಈಗಾಗಲೇ ಚುನಾವಣಾ ಆಯೋಗ ಪೂರ್ವ ತಯಾರಿ ಮಾಡಿಕೊಂಡಿದೆ. ಇಂದು ಸಂಜೆ ದಿನಾಂಕ ಘೋಷಣೆಯಾದಲ್ಲಿ ಸಂಜೆಯಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ.