ಡಿ ಗ್ರೇಡ್ ಸಿನಿಮಾಕ್ಕೂ ನಾನು ರೆಡಿ ಎಂದ ಕನ್ನಡತಿ ಸ್ನೇಹಾ

ನಾನು ಡಿ ಗ್ರೇಡ್ ಸಿನಿಮಾದಲ್ಲಿ ನಟಿಸೋದಕ್ಕೆ ನಾಚಿಕೆ ಪಡೋದಿಲ್ಲ ಎಂದು ಕನ್ನಡತಿ, ನಟಿ ಸ್ನೇಹಾ ಉಲ್ಲಾಳ್ ಎದೆ ತಟ್ಟಿ ಹೇಳಿದ್ದಾರೆ.ಥೇಟ್ ಐಶ್ವರ್ಯಾ ರೈಯಂತೆಯೇ ಇದ್ದಾಳೆ ಎಂಬ ಕಾರಣಕ್ಕಾಗಿ ಇದ್ದಕ್ಕಿದ್ದಂತೆ ಗುರುತಿಸಿಕೊಂಡ ಸ್ನೇಹಾ ಉಲ್ಲಾಳ್ ಎಂಬ ಬೆಡಗಿಯನ್ನು ಸಲ್ಮಾನ್ ಖಾನ್ ತನ್ನ ಲಕ್ಕಿ ಎಂಬ ಚಿತ್ರಕ್ಕಾಗಿ ನಾಯಕಿ ನಟಿಯಾಗಿ ಆಯ್ಕೆ ಮಾಡಿದ್ದರು. ಹೀಗಾಗಿ ಸ್ನೇಹಾ ಸಾಕಷ್ಟು ಪ್ರಸಿದ್ಧಿ ಪಡೆದಳು.

 ಮಂಗಳೂರು ಮೂಲದ ದೇವಾಡಿಗ ಜನಾಂಗದ ಸ್ನೇಹಾ ಉಲ್ಲಾಳ್ ಹುಟ್ಟಿದ್ದು ಬೆಳೆದದ್ದು ಎಲ್ಲಾ ಮಸ್ಕತ್‌ನಲ್ಲಿ. ಪಿಯುಸಿ ಓದಿದ್ದು ಮುಂಬೈನ ಕಾಲೇಜಿನಲ್ಲಿ. ಆಗಷ್ಟೇ ಐಶ್ವರ್ಯಾ ರೈಯಿಂದ ಬೇರ್ಪಟ್ಟು ವಿರಹಿಯಾಗಿದ್ದ ಸಲ್ಮಾನ್ ತಾನು ತನ್ನ ಮುಂದಿನ ಚಿತ್ರಕ್ಕೆ ಥೇಟ್ ಐಶ್‌ಳಂತಿರುವ ಹುಡುಗಿಯನ್ನೇ ಹುಡುಕಿದ್ದೇನೆಂದು ಪ್ರಕಟಿಸಿದ್ದರು. ತನ್ನ ಮಾತಿನಂತೆಯೇ ಅದೆಲ್ಲೋ ಮುಂಬೈಯ ಕಾಲೇಜಿನಲ್ಲಿ ಹಾಯಾಗಿ ಓದಿಕೊಂಡಿದ್ದ ಈ ಸ್ನೇಹಾ ಎಂಬ ಬೆಡಗಿಯನ್ನು ಪೂರ್ವಾಪರ ಗೊತ್ತಿಲ್ಲದೇ ಆಯ್ಕೆ ಮಾಡಿ ಸೈ ಎನಿಸಿಕೊಂಡಿದ್ದರು ಸಲ್ಮಾನ್.

 ಹೀಗೆ ಬಾಲಿವುಡ್‌ಗೆ ಅನಾಯಾಸವಾಗಿ ಕಾಲಿಟ್ಟ ಸ್ನೇಹಾಗೆ ಈಗ ಚಿತ್ರರಂಗದ ರುಚಿ ಹತ್ತಿದ್ದು, ಇದೀಗ ಚಿತ್ರರಂಗದಲ್ಲೇ ನೆಲೆ ನಿಲ್ಲುವ ಬಯಕೆ ವ್ಯಕ್ತಪಡಿಸಿದ್ದಾಳೆ. ಜೊತೆಗೆ ತಾನು ಎಂತಹ ಡಿ ಗ್ರೇಡ್ ಸಿನಿಮಾ ಮಾಡೋದಕ್ಕೂ ನಾಚಿಕೆ ಪಡೋದಿಲ್ಲ ಎಂದು ತನ್ನ ಸಾಮರ್ಥ್ಯವನ್ನು ಹೇಳಿಕೊಂಡಿದ್ದಾಳೆ!

1987ರಲ್ಲಿ ಜನಿಸಿದ ಈಗ ಸ್ನೇಹಾಗೆ 22ರ ಹರೆಯ. 17ರ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದಿದ್ದರಿಂದ ಇನ್ನೂ ವಯಸ್ಸು ಮೀರಿಲ್ಲ. ದಕ್ಷಿಣದಲ್ಲಿ ನಾನು ಯಾವತ್ತೂ ಸಿನಿಮಾಗದಲ್ಲಿ ನಟಿಸೋದನ್ನು ಬಿಡೋದಿಲ್ಲ. ದಕ್ಷಿಣದ ಚಿತ್ರರಂಗ ನೀವೊಬ್ಬ ಹುಡುಗಿಯಾಗಿರೋದನ್ನು ಕಲಿಸುತ್ತದೆ, ಒಬ್ಬ ಉತ್ತಮ ನಟಿಯಾಗೋದು ಕಲಿಸುತ್ತದೆ. ಆದರೆ ಬಾಲಿವುಡ್ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ ಎನ್ನುತ್ತಾಳೆ.

2005ರಲ್ಲಿ ಲಕ್ಕಿ ಚಿತ್ರದಲ್ಲಿ ನಟಿಸಿದ ನಂತರ ಸ್ನೇಹಾ ಆರ್ಯನ್ ಚಿತ್ರದಲ್ಲಿ ನಟಿಸಿದಳು. ಆರ್ಯನ್ ನಂತರ ಕೆಲವು ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡ ಸ್ನೇಹಾ ನೇನು ಮೇಕು ತೆಲುಸಾ ಹಾಗೂ ಉಲ್ಲಾಸಂಗ ಉತ್ಸಾಹಂಗ ಚಿತ್ರದಲ್ಲಿ ನಟಿಸಿದಳು. ಸದ್ಯಕ್ಕೀಗ ಕ್ಲಿಕ್ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸ್ನೇಹಾ ಆ ಮೂಲಕವಾದರೂ ಕ್ಲಿಕ್ಕಾಗಲು ಹರಸಾಹಸ ಪಡುತ್ತಿದ್ದಾಳೆ. ನಾನು ಬಹಳ ಮಂದಿಯನ್ನು ಬಾಲಿವುಡ್ಡಿನಲ್ಲಿ ನಂಬಿದೆ. ಆದರೆ ಅವರೆಲ್ಲ ನನ್ನನ್ನು ತಪ್ಪಾಗಿ ಗೈಡ್ ಮಾಡಿದರು. ಬಾಲಿವುಡ್ ಹೀಗೆ ಎಂದು ನನಗೆ ಗೊತ್ತೇ ಇರಲಿಲ್ಲ ಎನ್ನುತ್ತಾಳೆ ಈ ಸ್ನೇಹಾ.

ಈಗ ನಾನೇನು ಅಂತ ತೋರಿಸಲು ನನಗೆ ಸಮಯ ಬಂದಿದೆ. ಈಗೊಂದು ಉತ್ತಮ ಅವಕಾಶ ಬಂದಿದೆ. ಥ್ರಿಲ್ಲರ್ ಕಥಾನಕವಾಗಿರುವ ಇದು ಈ ವರ್ಷ ಬಿಡುಗಡೆ ಕಾಣಬಹುದು ಎನ್ನುತ್ತಾಳೆ ಸ್ನೇಹಾ.ನಾನು ಮೂರ್ನಾಲ್ಕು ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿದೆ. ಏಪ್ರಿಲ್‌ನಲ್ಲಿ ನನ್ನ ನಾಲ್ಕನೇ ದಕ್ಷಿಣ ಭಾರತೀಯ ಚಿತ್ರ ಬಿಡುಗಡೆ ಕಾಣುತ್ತಿದೆ. ಕಿಸ್ ಮಾಡುವ ದೃಶ್ಯವಿದೆ ಎನ್ನುವ ಕಾರಣಕ್ಕೆ ಒಬ್ಬ ನಿರ್ದೇಶಕರ ಬಳಿ ಸಿನಿಮಾ ತಿರಸ್ಕರಿಸಿದೆ. ಆದರೆ ಎರಡು ತಿಂಗಳ ಬಳಿಕ ಅವರು ಮತ್ತೆ ನನಗೆ ಫೋನ್ ಮಾಡಿ ಇನ್ನೊಂದು ಚಿತ್ರದಲ್ಲಿ ಅವಕಾಶ ನೀಡಿದರು. ಅವರು ನನಗೆ ಚೆನ್ನಾಗಿ ಮಾರ್ಗದರ್ಶನ ಮಾಡಿದರು.

 ದಕ್ಷಿಣ ಭಾರತೀಯರು ತುಂಬ ನಂಬಲರ್ಹ ಮಂದಿ. ಆದರೆ ಬಾಲಿವುಡ್‌ನಲ್ಲಿ ಹಾಗಲ್ಲ. ಬಹುಬೇಗನೆ ಮಿಸ್ ಗೈಡ್ ಮಾಡ್ತಾರೆ, ನನಗೆ ಮಾಡಿದಂತೆ ಎನ್ನುತ್ತಾರೆ ಸ್ನೇಹಾ.ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲೂ ನಾನೀಗ ತಯಾರು. ನಾನು ಡಿ ಗ್ರೇಡ್ ಚಿತ್ರಗಳಲ್ಲಿ ನಟಿಸಲೂ ಕೂಡಾ ಸಿದ್ಧ ಎನ್ನುತ್ತಾಳೆ ಈ ಉಲ್ಲಾಳದ ಬೆಡಗಿ.ಹಾಗಾದರೆ ಈವರೆಗೆ ಬಾಲಿವುಡ್ಡಿನಲ್ಲಿ ನಟಿಸಿದ ಚಿತ್ರಗಳ ಬಗ್ಗೆ ಪಶ್ಚಾತಾಪವಿದೆಯೇ ಎಂದರೆ ಈಕೆ, ಖಂಡಿತಾ ಇಲ್ಲ, ಮತ್ತೊಮ್ಮೆ ಸಿನಿಮಾ ಮಾಡುವಾಗ ಯೋಚಿಸಿ ಮಾಡುತ್ತೇನೆ. ಮತ್ತೆ ರಿಎಂಟ್ರಿ ಈಗ ತೆಗೆದುಕೊಳ್ಳುತ್ತೇನೆ. ನಾನು ಜನರಿಗೆ ಪರಿಚಯವಾದುದೇ ಬಾಲಿವುಡ್ ಮೂಲಕ. ಹಾಗಾಗಿ ಆ ಬಗ್ಗೆ ಬೇಸರವಿಲ್ಲ ಎನ್ನುತ್ತಾಳೆ ಸ್ನೇಹಾ. ಸ್ನೇಹಾಗೆ ಆಲ್ ದಿ ಬೆಸ್ಟ್.

Leave a Reply