ವಿದೇಶದಿಂದ ಮರಳುವವರು ಅಲ್ಲಿಂದ ಬರುವಾಗ ಚಾಕಲೇಟ್, ಸಿಹಿ ತಿನಿಸುಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ತರುತ್ತಾರೆ. ಸಿಹಿ ತಿನಿಸಿನ ಆಸೆಗೆ ಬಿದ್ದ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಬಡಪಾಯಿ ಪೋರ್ಟರ್ ಒಬ್ಬ ಕದ್ದು ತಿನ್ನಲು ಹೋಗಿ ಇದೀಗ ಜೈಲು ಪಾಲಾಗಿದ್ದಾನೆ.
ಇಂತದೊಂದು ಘಟನೆ ಯುಎಇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿ ಪ್ರಯಾಣಿಕರ ಲಗೇಜ್ ಸಾಗಿಸುವ ಕೆಲಸ ಮಾಡುತ್ತಿದ್ದ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಬಾಯಿ ಚಪಲ ತಾಳಲಾರದೆ ಪ್ರಯಾಣಿಕರ ಲಗೇಜ್ ನಲ್ಲಿದ್ದ ಕ್ಯಾಂಡಿ, ಸಿಹಿ ತಿನಿಸುಗಳನ್ನು ಕದ್ದು ತಿಂದಿದ್ದಾನೆ. ಈತನ ಕ್ರತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 3 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆಯಲ್ಲದೇ ಶಿಕ್ಷಾ ಅವಧಿ ಮುಗಿದ ಬಳಿಕ ಸ್ವದೇಶಕ್ಕೆ ವಾಪಾಸ್ ಕಳಿಸಲು ಆದೇಶಿಸಿದೆ. ತಾನು ಕ್ಯಾಂಡಿ ಹಾಗು ಸಿಹಿ ತಿನಿಸು ಹೊರತುಪಡಿಸಿ ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಕದ್ದಿಲ್ಲವೆಂದು ಆರೋಪಿ ಪರಿಪರಿಯಾಗಿ ಬೇಡಿಕೊಂಡರೂ ನ್ಯಾಯಾಲಯ ಇದನ್ನು ಪರಿಗಣಿಸಿಲ್ಲ.