ಇಂಗು ತಿಂದ ಮಂಗನಂತಾದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ


ಗೋವಾ : ಆರ್ ಎಸ್ ಎಸ್ ನ ಗೋವಾ ಘಟಕದ ಮುಖ್ಯಸ್ಥ ಸುಭಾಶ್ ವೆಲ್ಲಿಂಗ್ಕರ್ ಅವರನ್ನು ಕಿತ್ತೊಗೆದಿರುವ ಆರ್ ಎಸ್ ಎಸ್ ನ ನಿರ್ಧಾರದಿಂದ ಸಂಘದಲ್ಲೇ ಬಿನ್ನಾಭಿಪ್ರಾಯ ಉಂಟಾಗಿದೆ. ಹಲವಾರು ಹಿರಿಯ ಆರ್ ಎಸ್ ಎಸ್ ನಾಯಕರ ಪ್ರಕಾರ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾರ ಕುತಂತ್ರದಿಂದಲೇ ಸುಭಾಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆಯೆಂದು ವರದಿಯೊಂದು ತಿಳಿಸಿದೆ.

ಗೋವಾದಲ್ಲಿ ಭಾರತೀಯ ಭಾಷಾ ಸುರಕ್ಷಾ ಮಂಚ್ ಅಲ್ಲಿನ ಶಾಲೆಗಳಲ್ಲಿ ಕೊಂಕಣಿ ಮತ್ತು ಮರಾಠಿಯನ್ನು ಕಲಿಕಾ ಮಾಧ್ಯಮವಾಗಿಸಬೇಕೆಂದು ಬೇಡಿಕೆ ಸಲ್ಲಿಸುತ್ತಿರುವುದು ಮತ್ತು ಸುಭಾಶ್ ವೆಲ್ಲಿಂಗ್ಕರ್ ರಚಿಸಿರುವ ಭಾರತೀಯ ಭಾಷಾ ಸುರಕ್ಷಾ ಮಂಚ್ ಗೋವಾದಲ್ಲಿನ ಬಿಜೆಪಿ ಸರಕಾರಕ್ಕೆ ನಿರಂತರವಾಗಿ ಸವಾಲೊಡ್ದುತ್ತಿರುವುದು ಅಮಿತ್ ಶಾರ ಕಣ್ಣು ಕೆಂಪಾಗಿಸಿದೆ. ಅಮಿತ್ ಶಾ ಅವರು ಆ.21ರಂದು ಗೋವಾಗೆ ಭೇಟಿ ನೀಡಿದಾಗ ಸಂಘ ಪರಿವಾರದ ಕಾರ್ಯಕರ್ತರೂ ಸೇರಿದಂತೆ ಸುರಕ್ಷಾ ಮಂಚ್ನ ಕಾರ್ಯಕರ್ತರು ಅವರಿಗೆ ಕರಿಪತಾಕೆ ತೋರಿಸಿದ ಘಟನೆಯಿಂದ ಅಮಿತ್ ಷಾ ಕೋಪಗೊಂಡಿದ್ದೇ ಸುಭಾಶ್ ವಿರುದ್ಧ ಕ್ರಮಕ್ಕೆ ಕಾರಣವೆಂದು ತಿಳಿಯಲಾಗಿದೆ.

ರಾಜಸ್ಥಾನದ ಹಿರಿಯ ಆರ್ ಎಸ್ ಎಸ್ ಪದಾಧಿಕಾರಿಯೊಬ್ಬರು, ಅಮಿತ್ ಷಾ ಬಿಜೆಪಿಯ ಸರ್ವಾಧಿಕಾರಿಯಾಗಿರಬಹುದು, ಆದರೆ ಸಂಘದ ಮೇಲೆ ಅವರು ಸವಾರಿ ಮಾಡುವುದನ್ನು ಅನುಮತಿಸಲಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಭಾಶ್ ಅವರನ್ನು ಆರ್ ಎಸ್ ಎಸ್ ಗೋವಾ ಘಟಕದ ಮುಖ್ಯಸ್ಥ ಹುದ್ದೆಯಿಂದ ಕಿತ್ತೊಗೆದಿರುವುದು ಸಂಘದ ಕಾರ್ಯಚಟುವಟಿಕೆಗಳಲ್ಲಿ ಬಿಜೆಪಿಯ ನೇರ ಹಸ್ತಕ್ಷೇಪವಿದೆಯೆಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಗೋವಾದ ಹಲವು ಆರ್ ಎಸ್ ಎಸ್ ಪದಾಧಿಕಾರಿಗಳು ಆರೋಪಿಸುತ್ತಾರೆ.

ಹೀಗಾಗಲೇ ಸುಭಾಶ್ ಅವರು ಗೋವಾದ ಆರ್ ಎಸ್ ಎಸ್ ಘಟಕವು ಸ್ವತಂತ್ರ ಸಂಘಟನೆಯಾಗಿ ಕಾರ್ಯನಿರ್ವಹಿಸುವುದು ಎಂದು ಹೇಳಿರುವುದು ಗೋವಾದಲ್ಲಿ ಆರ್ ಎಸ್ ಎಸ್ ನಾಯಕತ್ವಕ್ಕೆ ಮತ್ತು ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಷಾರ ಮಾತಿಗೆ ಬೆಲೆಯಿಲ್ಲದಂತಾಗಿದೆ. ಗೋವದಲ್ಲಿನ ವಿದ್ಯಮಾನದಿಂದ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇ ಬೇಕೆಂಬ ಅಮಿತ್ ಶಾರ ಕಾರ್ಯತಂತ್ರಕ್ಕೆ ಹಿನ್ನಡೆಯುಂಟಾಗಿದೆ.

* * * * * * * * 

Leave a Reply