ಅಚ್ಛೇ ದಿನ್…! ಯಾರಿಗೆ?..

ಮೋದಿಯ ಆಗಮನ… ದಲಿತ ಮತ್ತು ಅಲ್ಪಸಂಖ್ಯಾತರ  ಧಮನ

ಗುಜರಾತ್, ಕಾಶ್ಮೀರ ಹೊತ್ತಿ ಉರಿಯುತ್ತಿದೆ. ಬುರ್ಹಾನ್ ವನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಸತ್ತವರು ಎಷ್ಟು ಮಂದಿಯೋ, ಯಾರಿಗೂ ಲೆಕ್ಕ ಸಿಗುತ್ತಿಲ್ಲ. ಮಾಧ್ಯಮಗಳನ್ನು ಪೊಲೀಸರು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳು ಬಂದ್ ಆಗಿವೆ.ಗುಜರಾತ್ನಲ್ಲಿ ಸತ್ತ ದನದ ಚರ್ಮ ತೆಗೆಯುತ್ತಿದ್ದ ದಲಿತ ಯುವಕರನ್ನು ಕಟ್ಟಿ ಹಾಕಿ ನಾಯಿಗೆ ಹೊಡೆಯುವಂತೆ ಹೊಡೆಯಲಾಗಿದೆ. ದಲಿತರು ದಂಗೆಯೆದ್ದಿದ್ದಾರೆ. ಸತ್ತ ದನದ ಮೂಳೆ ಮಾಂಸಗಳನ್ನೆಲ್ಲ ತಂದು ಸರ್ಕಾರಿ ಕಚೇರಿಗಳಲ್ಲಿ ಎಸೆದು ನೀವೇ ಸಂಸ್ಕಾರ ಮಾಡಿಕೊಳ್ಳಿ ಎಂದು ಸವಾಲೆಸೆದಿದ್ದಾರೆ. ಪ್ರತಿರೋಧನೆ ಮಾಡುವ ಪ್ರತಿಪಕ್ಷ ಯಾವುದೊ ಒಡಂಬಡಿಕೆ ಮಾಡಿಕೊಂಡಂತಿದೆ. ಘಟನೆ ನಡೆದು ವಾರ ಕಳೆದರು ಮಾಧ್ಯಮಗಳು ಮೌನವಹಿಸಿದೆ.ಲಕ್ಷಲಕ್ಷ ಸಂಖ್ಯೆಯಲ್ಲಿ ದಲಿತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದಕ್ಕೆಲ್ಲಾ ಹೇಳಿಕೆ ಕೊಡಬೇಕಾದ ಪ್ರಧಾನಿ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ವಿದೇಶದಲ್ಲಿ ನಡೆಯುವ ಘಟನೆ ಬಗ್ಗೆ ಸಂತಾಪ ಸೂಚಿಸುವ ಪ್ರಧಾನಿ ದೇಶದಲ್ಲಿ ನಡೆಯುತ್ತಿರುವ ಅರಾಜಕತೆಗೆ ತುಟಿಪಿಟಿಕ್ಕೆನ್ನುತಿಲ್ಲ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡ ದಯಾಶಂಕರ್ ಸಿಂಗ್ ಎನ್ನುವಾತ ಹೆಣ್ಣೊಬ್ಬಳ ಮೇಲೆ ಅದರಲ್ಲೂ ಬಿಎಸ್ಪಿ  ನಾಯಕಿಯ ಮೇಲೆ  ಹೊಲಸು  ಮಾತನ್ನಾಡಿದ್ದಾನೆ. ಮಾಯಾವತಿಯನ್ನು ವೇಶ್ಯೆಯೆಂದು ನಿಂದಿಸಿರುವ ಸಿಂಗ್, ದಲಿತ ಹೆಣ್ಣು ಮಕ್ಕಳ ಕುರಿತಂತೆ ತಮ್ಮ ಮನಸ್ಥಿತಿಯನ್ನ ಈ ಮೂಲಕ ಹೊರಹಾಕಿದ್ದಾನೆ.
ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಹೇಗಾದರೂ ಅಧಿಕಾರ ಹಿಡಿಯಲೇಬೇಕೆಂಬ ಬಿಜೆಪಿಯ ಆಸೆಗೆ ಈ ಹೇಳಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದಲಿತರನ್ನು ತಮ್ಮ ಕಡೆಗೆ ಸೆಳೆಯಲು ಬೇರೆ ಬೇರೆ ರೀತಿಯಲ್ಲಿ ಪ್ರಹಸನ ನಡೆಸುತ್ತಿರುವ ಬಿಜೆಪಿಯ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಮತ್ತು ಆರೆಸ್ಸೆಸ್ಗೆ  ಇವರ ಮಾತು ಭಾರಿ ಮುಜುಗರಕ್ಕೆ ಈಡು ಮಾಡಿದೆ. ಇಂದು ದೇಶದ ದಲಿತರೆಲ್ಲ ಪಕ್ಷಭೇದ ಮರೆತು ಬಿಜೆಪಿಯ ವಿರುದ್ಧ ನಿಂತಿದ್ದಾರೆ. ಮಾಯಾವತಿಯ ಮೂಲಕ ಜನರು ತಮ್ಮ ಹೊಸ ರಾಜಕೀಯ ಕನಸುಗಳನ್ನು  ಕಟ್ಟಿಕೊಂಡಿದ್ದಾರೆ.
ಒಂದೆಡೆ ಕೇಂದ್ರ ಸರಕಾರ ಗೋಮಾಂಸ ಉತ್ಪಾದನೆಗೆ ಪ್ರೋತ್ಸಾಹ ಕೊಡುತ್ತಿದೆ. ಗೋಮಾಂಸ ರಫ್ತುವಿನಿಂದ ಬರುವ ಆದಾಯ ಬಾಚಿಕೊಳ್ಳುತ್ತಿದೆ. ಕಸಾಯಿಖಾನೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತಿವೆ. ವಿಷಾದನೀಯ ಸಂಗತಿಯೆಂದರೆ, ಈವರೆಗೆ ಗೋಮಾಂಸದ ಮೇಲಷ್ಟೇ ದಾಳಿ ದುಷ್ಕರ್ಮಿಗಳು ಈಗ ಗೋವುಗಳ ಚರ್ಮ ಸಾಗಿಸುವವರ ಮೇಲೆ ದಾಳಿ ನಡೆಸುತ್ತಿದ್ದಾರೆ.ಆದರೆ ದಲಿತರು ಒಂದಾಗಿ ಇದರ ಬಗ್ಗೆ ಪ್ರತಿಭಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದಲಿತರ ಜೊತೆ ಎಲ್ಲಾ ಅಲ್ಪಸಂಖ್ಯಾತರು ಕೈ ಜೋಡಿಸಬೇಕಾಗಿದೆ. ಇಂತಹ ಹಲ್ಲೆಗಳನ್ನು,  ಆರೆಸ್ಸೆಸ್ ಕುತಂತ್ರಗಳನ್ನು ಮುಸ್ಲಿಮರು ಹಲವು ದಶಕಗಳಿಂದ ಸಹಿಸಿಕೊಂಡು ಬಂದಿದ್ದಾರೆ. ಹಿಂದೆ ಮುಸ್ಲಿಮರ ಮೇಲೆ ದಾಳಿ ನಡೆಸಲು ಸಂಘ ಪರಿವಾರ ದಲಿತ ಯುವಕರನ್ನು ಬಳಸಿಕೊಳ್ಳುತ್ತಿತ್ತು. ಈಗ ದಲಿತರಿಗೆ ಅದು ತಿರುಗುಬಾಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗೋಮಾಂಸ ತಿಂದಿದ್ದಾರೆಂದು ಅಖ್ಲಾಕ್ ಎಂಬುವರನ್ನು ಥಳಿಸಿ ಕೊಂದುಹಾಕಲಾಯಿತು. ಆಗ ಎಲ್ಲರೂ ಒಂದಾಗಿ ಈ ಸಂಘಪರಿವಾರದ ಗೋಮಾಂಸ ವಿರೋಧಿ ಆಂದೋಲನದ ವಿರುದ್ಧ ನಿಂತಿದ್ದರೆ ಇಂದು ದಲಿತರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ.
ಇಂತಹ ದಾಳಿಯ ಹಿಂದೆ ಜಾತೀಯತೆಯ ಮನಸ್ಸು ಮತ್ತು ರಾಜಕೀಯ ಕೆಲಸ ಮಾಡುತ್ತದೆ. ಇದೆ ರೀತಿ ದಾಳಿ ಮುಂದುವರಿದರೆ  ಈ ದೇಶದ ದಲಿತರು, ಅಲ್ಪಸಂಖ್ಯಾತರು, ಶೋಷಿತ ಸಮುದಾಯ ಒಂದಾಗಿ ಬಂಡೇಳುವ ದಿನ ದೂರವಿಲ್ಲ. ಅದಕ್ಕೆ ಬಿಜೆಪಿ ಮತ್ತು ಸಂಘಪರಿವಾರವೇ ಹೊಣೆಯಾಗಲಿದೆ.

* * * * * * *

Leave a Reply