ವರದಕ್ಷಿಣೆಯ ಆಸೆಗಾಗಿ 25 ವರ್ಷದ ಯುವತಿಯೊಬ್ಬಳು ಪುರುಷರಂತೆ ವೇಷ ಧರಿಸಿ ಕಳೆದ ನಾಲ್ಕು ವರ್ಷದಲ್ಲಿ ಇಬ್ಬರು ಹುಡುಗಿಯರನ್ನು ಮದುವೆಯಾಗಿ ವಂಚಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಸ್ವೀಟಿ ಸೇನ್ ಎಂಬ ಮಹಿಳೆ ಕೃಷ್ಣ ಸೇನ್ ಎಂದು ತನ್ನ ಹೆಸರು ಬದಲಿಸಿಕೊಂಡು ಇಬ್ಬರು ಯುವತಿಯರನ್ನು ಮದುವೆಯಾಗಿ ವಂಚಿಸಿದ್ದಾಳೆ. ಈ ಸಂಬಂಧ ಉತ್ತರಾಖಂಡದ ಹಲ್ದ್ವಾನಿಯ ಪೊಲೀಸರು ಸ್ವೀಟಿ ಸೇನ್ಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
2013ರಲ್ಲಿ ಪುರುಷರಂತೆ ಡ್ರೆಸ್ ಮಾಡಿಕೊಂಡು ಫೋಟೋ ತೆಗೆಸಿಕೊಂಡು ಫೇಸ್ಬುಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಅದರಲ್ಲಿ ಹಾಕಿಕೊಂಡಿದ್ದಳು. ತದನಂತರ ಅದರ ಮೂಲಕ ಹಲವು ಯುವತಿಯರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಗೆಳೆತನ ಬೆಳೆಸಿದ್ದಳು.
ಆ ನಂತರ 2014ರಲ್ಲಿ ಹಲ್ದ್ವಾನಿಯ ಕಥಗೋಡಮ್ ಪ್ರದೇಶದ ಯುವತಿಯೊಬ್ಬರೊಂದಿಗೆ ಸ್ನೇಹ ಬೆಳೆಸಿ ಆಕೆಯನ್ನು ಮದುವೆಯಾಗಿದ್ದಳು. ಮದುವೆಯ ಸಂದರ್ಭದಲ್ಲಿ ಸ್ವೀಟಿ ತನ್ನ ತಂದೆ ಸಿಎಫ್ಎಲ್ ಬಲ್ಬ್ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದಳು.
ಕೆಲ ದಿನಗಳ ನಂತರ ಸ್ವೀಟಿ ಸೇನ್ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದಳು. ಅದರಂತೆ ಯುವತಿಯ ಕುಟುಂಬಸ್ಥರಿಂದ 8.5 ಲಕ್ಷ ರೂ. ಪಡೆದಿದ್ದಳು.
ಇಷ್ಟಕ್ಕೇ ಸುಮ್ಮನಾಗದ ಸ್ವೀಟಿ ಕಾಲಾದುಂಗಿ ಪಟ್ಟಣದ ಮತ್ತೊಬ್ಬ ಯುವತಿಯೊಂದಿಗೆ ಗೆಳೆತನ ಬೆಳೆಸಿ 2016ರ ಏಪ್ರಿಲ್ನಲ್ಲಿ ಎರಡನೇ ಮದುವೆಯಾಗಿದ್ದಳು. ಆ ನಂತರ ಹಲ್ದ್ವಾನಿಯಲ್ಲಿ ಬಾಡಿಗೆ ಮನೆ ಮಾಡಿ ಇಬ್ಬರೂ ಪತ್ನಿಯರನ್ನು ಒಟ್ಟಿಗೆ ಇರಿಸಿದ್ದಳು.
ಸ್ವೀಟಿಯ ಎರಡನೇ ಪತ್ನಿಗೆ ತನ್ನ ಪತಿ ಪುರುಷನಲ್ಲ ಮಹಿಳೆ ಎಂಬುದು ಗೊತ್ತಾಗಿತ್ತು. ಆದರೆ, ಸ್ವೀಟಿ ಹಣದ ಆಸೆ ತೋರಿಸಿ ಆಕೆಯನ್ನು ಸುಮ್ಮನಿರಿಸಿದ್ದಳು. ಆದರೆ, ಮೊದಲ ಪತ್ನಿ ವರದಕ್ಷಿಣೆ ಕಿರುಕುಳ ತಾಳಲಾರದೆ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನನ್ವಯ ಪೊಲೀಸರು ಕೃಷ್ಣ ಸೇನ್ನನ್ನು ಬಂಧಿಸಿದರು. ಆದರೆ, ಕೃಷ್ಣ ಸೇನ್ ಪುರುಷನಲ್ಲ ಮಹಿಳೆ ಎಂದು ತಿಳಿದು ಪೊಲೀಸರೇ ಹೌಹಾರಿದ್ದಾರೆ. ಆ ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಸ್ವೀಟಿ ಸೇನ್ ತನ್ನ ಅಸಲಿ ಕತೆಯನ್ನು ಹೇಳಿದ್ದಾಳೆ.
ವಿಚಾರಣೆಯ ವೇಳೆ ಸ್ವೀಟಿ ಚಿಕ್ಕವಯಸ್ಸಿನಿಂದಲೂ ತನಗೆ ಹುಡುಗರಂತೆ ಇರಬೇಕು ಎಂಬ ಆಸೆ ಇತ್ತು. ಅದರಂತೆ ಹುಡುಗರಂತೆ ಹೇರ್ ಕಟ್ ಮಾಡಿಕೊಂಡು ಮೋಟಾರ್ ಸೈಕಲ್ ಓಡಿಸುತ್ತಿದ್ದೆ ಮತ್ತು ಸಿಗರೇಟ್ ಸೇದುತ್ತಿದ್ದೆ ಎಂದು ತಿಳಿಸಿದ್ದಾಳೆ.
ಮದುವೆಯಾದ ನಂತರ ತನ್ನ ಪತ್ನಿಯರಿಗೆ ತನ್ನ ದೇಹವನ್ನು ಮುಟ್ಟಲು ಅವಕಾಶ ನೀಡಿರಲಿಲ್ಲ. ಜತೆಗೆ ಲೈಂಗಿಕ ಆಟಿಕೆಗಳನ್ನು ಬಳಸಿ ಪತ್ನಿಯರ ಕಾಮತೃಷೆಯನ್ನು ತೀರಿಸುತ್ತಿದ್ದೆ. ಆ ಮೂಲಕ ತನ್ನ ಗುಟ್ಟನ್ನು ಕಾಪಾಡಿಕೊಂಡಿದ್ದಾಗಿ ಆಕೆ ತಿಳಿಸಿದ್ದಾಳೆ.