ವಸತಿ ವ್ಯವಸ್ಥೆಯಿಲ್ಲದ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಯೋಜನೆ ಜಾರಿಯಾಗಲಿದ್ದು, ಮೊದಲ ಹಂತದಲ್ಲಿ ರಾಜ್ಯದ ಯಾವುದಾದರೊಂದು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯೋಜನೆ ಪ್ರಾರಂಭಿಸಲಾಗುತ್ತದೆ ಎಂದು ಹಾಗೂ ನಾಗರಿಕ ಪೊರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆಹಾರ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ರಾಜ್ಯದ ಯಾವುದಾದರೊಂದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದನ್ನು ಜಾರಿಗೊಳಿಸಲು ಪ್ರಸ್ತಾವನೆ ಸಲ್ಲಿಸುವಂತೆ ಆದೇಶ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಯ ಮೂಲಕ ಅಕ್ಕಿ, ಗೋಧಿ ಮಾತ್ರವಲ್ಲದೆ ಪ್ರೋಟಿನ್ಯುಕ್ತ ದ್ವಿದಳ ಧಾನ್ಯಗಳನ್ನು ಪ್ರತಿ ಕುಟುಂಬಕ್ಕೆ ಒಂದು ಕೆ.ಜಿ.ಯಂತೆ ನೀಡಲಾಗುವುದು. ಹಾಗೂ ತಾಳೆ ಎಣ್ಣೆ, ತೆಂಗಿನ ಎಣ್ಣೆ, ಸೂರ್ಯ ಕ್ರಾಂತಿ ಎಣ್ಣೆಯಲ್ಲಿ ಯಾವುದಾದರೊಂದು ಬಗೆಯ ಎಣ್ಣೆ ವಿತರಿಸಲಾಗುವುದು ಎಂದು ಆಹಾರ ಹಾಗೂ ನಾಗರಿಕ ಪೊರೈಕೆ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
* * * * * * * * * *