ಬೆಳಿಗ್ಗೆ ಎದ್ದ ಕೂಡಲೇ ಬ್ರೆಶ್ ಗೆ ಟೂತ್ ಪೇಸ್ಟ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ತೀರಾ. ನಿಮ್ಮ ಹಲ್ಲನ್ನು ಹೊಳೆಯುವಂತೆ ಮಾಡುವ ಪೇಸ್ಟ್ ಬರೀ ಹಲ್ಲಿಗೆ ಮಾತ್ರ ಅಲ್ಲ, ಅದು ಬಹುಪಯೋಗಿ ಅನ್ನೋದು ನಿಮಗೆ ಗೊತ್ತಾ..?
ಪೇಸ್ಟ್ ನಿಂದ ಅನೇಕ ಉಪಯೋಗಗಳಿವೆ. ಆಭರಣ ಸ್ವಚ್ಛಗೊಳಿಸಲು ಈ ಪೇಸ್ಟ್ ಸಹಕಾರಿ. ಗೋಲ್ಡ್ ಅಥವಾ ಮೆಟಲ್ ಆಭರಣಗಳನ್ನು ಮೊದಲು ಬ್ರಶ್ ಹಾಗೂ ಬಟ್ಟೆ ಬಳಸಿ ಕ್ಲೀನ್ ಮಾಡಿ. ಇನ್ನೂ ಧೂಳಿದೆ ಅಂತಾ ನಿಮಗೆ ಅನಿಸಿದ್ರೆ ಪೇಸ್ಟ್ ಹಚ್ಚಿ ಕ್ಲೀನ್ ಮಾಡಿದರೆ ಆಭರಣ ಹೊಳೆಯುವುದರಲ್ಲಿ ಎರಡು ಮಾತಿಲ್ಲ.
ಕಾರ್ಪೆಟ್ ಸ್ವಚ್ಛಗೊಳಿಸಲು ಇದನ್ನು ಬಳಸಬಹುದು. ಪೀಠೋಪಕರಣ ಅಥವಾ ಮೇಜಿನ ಮೇಲೆ ಚಹಾ ಕಲೆಯಾದ್ರೆ ಚಿಂತೆ ಬೇಡ. ಬಟ್ಟೆಗೆ ಪೇಸ್ಟ್ ಹಚ್ಚಿ ಸರಿಯಾಗಿ ಉಜ್ಜಿದರೆ ಕಲೆ ಮಾಯವಾಗುತ್ತೆ. ಡಿವಿಡಿ ಅಥವಾ ಸಿಡಿ ಮೇಲೆ ಬೀಳುವ ಗೆರೆಗಳನ್ನು ಪೇಸ್ಟ್ ತೆಗೆದು ಹಾಕುತ್ತದೆ. ಹತ್ತಿ ಸಹಾಯದಿಂದ ಸಿಡಿ ಮೇಲೆ ಪೇಸ್ಟ್ ಹಚ್ಚಿ ಕ್ಲೀನ್ ಮಾಡಬೇಕು.
ಮನೆ, ಕಾರಿನ ಗ್ಲಾಸ್ ಬ್ಲರ್ ಆಗಿದ್ದರೆ, ಪೇಸ್ಟ್ ಹಚ್ಚಿ ಸ್ವಚ್ಛಗೊಳಿಸಬಹುದು. ನಿಮ್ಮ ಶೂ ಸ್ವಚ್ಛಗೊಳಿಸಲೂ ಪೇಸ್ಟ್ ಸಹಕಾರಿ. ಶೂ ಅತೀ ಕೊಳಕಾಗಿದ್ದು ಸೋಪ್ ಬಳಸಿ ಸ್ವಚ್ಛಗೊಳಿಸಲು ಸಾಧ್ಯವಾಗದೇ ಇದ್ದಾಗ, ಪೇಸ್ಟ್ ಹಚ್ಚಿ ಬ್ರೆಶ್ ನಲ್ಲಿ ಕ್ಲೀನ್ ಮಾಡಿ. ನಿಮ್ಮ ಶೂ ಹೊಳೆಯುತ್ತೆ. ಮಕ್ಕಳ ಬಾಟಲ್ ಅಥವಾ ದಿನಬಳಕೆ ಬಾಟಲ್ ಗಳನ್ನು ಸ್ವಚ್ಛಗೊಳಿಸುವುದು ಕಷ್ಟ. ಕೆಳಗೆ ಕುಳಿತ ಕೊಳೆ ಹೋಗುವುದಿಲ್ಲ. ಆಗ ಪೇಸ್ಟ್ ಹಾಕಿ ಬ್ರೆಶ್ ನಲ್ಲಿ ವಾಶ್ ಮಾಡೋದು ಉತ್ತಮ.
ಉಗುರುಗಳನ್ನು ಪೇಸ್ಟ್ ಸ್ವಚ್ಛಗೊಳಿಸುತ್ತದೆ ಎಂದರೆ ನೀವು ನಂಬಲೇ ಬೇಕು. ಒಮ್ಮೊಮ್ಮೆ ಎಷ್ಟೇ ತೆಗೆದರೂ ನೇಲ್ ಪಾಲಿಶ್ ಹೋಗುವುದಿಲ್ಲ. ಅದರ ಬಣ್ಣ ಅಲ್ಲಲ್ಲಿ ಹಾಗೇ ಉಳಿದುಬಿಡುತ್ತದೆ. ಆಗ ಉಗುರಿಗೆ ಪೇಸ್ಟ್ ಹಚ್ಚಿ ಬಟ್ಟೆ ಅಥವಾ ಬ್ರೆಶ್ ನಿಂದ ಕ್ಲೀನ್ ಮಾಡಿ. ಬಟ್ಟೆಯ ಮೇಲಾಗುವ ಕಲೆಗಳನ್ನು ತೆಗೆಯಲೂ ಪೇಸ್ಟ್ ಸಹಕಾರಿ. ಅದರಲ್ಲೂ ಲಿಪ್ ಸ್ಟಿಕ್ ಬಣ್ಣ ಬಟ್ಟೆಗೆ ತಗುಲಿದ್ದರೆ, ಆ ಜಾಗಕ್ಕೆ ಪೇಸ್ಟ್ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ವಾಶ್ ಮಾಡಿದರೆ ಕಲೆ ಮಾಯವಾಗುತ್ತದೆ.
ಬೆಳ್ಳುಳ್ಳಿ, ಈರುಳ್ಳಿಯನ್ನು ಕೊಚ್ಚಿದಾಗ ನಿಮ್ಮ ಕೈನಿಂದ ಗಬ್ಬು ವಾಸನೆ ಬರುತ್ತೆ. ಆಗ ಪೇಸ್ಟ್ ಹಚ್ಚಿ ಕೈ ವಾಶ್ ಮಾಡಿದರೆ ಕೈ ಮೇಲೆ ಆಗುವ ಕಪ್ಪು ಕಲೆಯ ಜೊತೆಗೆ ವಾಸನೆಯೂ ಮಾಯವಾಗುತ್ತದೆ. ಅಡುಗೆ ಮನೆ ಅಥವಾ ಬಾತ್ ರೂಂ ನಲ್ಲಿಗಳು ಕಲೆಯಾಗಿರುತ್ತವೆ. ಇದನ್ನು ಹೋಗಲಾಡಿಸಲು ಅನೇಕರು ನಿಂಬು ಬಳಸುತ್ತಾರೆ. ಅದರ ಬದಲು ಪೇಸ್ಟ್ ಬಳಸಿದರೆ ಕಲೆ ಮಾಯವಾಗಿ ನಲ್ಲಿ ಹೊಳೆಯುತ್ತೆ. ನೆನಪಿಡಿ ಕಲರ್ ಇರುವ ಪೇಸ್ಟ್ ಗಳನ್ನು ಇದಕ್ಕೆ ಬಳಸಬಾರದು.