ಕೆಆರ್‌ಎಸ್‌ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದೆ ಟಿಪ್ಪು ಸುಲ್ತಾನ್ ಎಂದ ಸಚಿವ ಮಹದೇವಪ್ಪ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಅಣೆಕಟ್ಟಿನ ಇತಿಹಾಸಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಕೆಆರ್‌ಎಸ್‌ ಅಣೆಕಟ್ಟಿಗೆ ಮೊದಲಿಗೆ ಟಿಪ್ಪು ಸುಲ್ತಾನ್ ಅವರು ಅಡಿಗಲ್ಲು ಹಾಕಿದ್ದರು ಎಂದು ತಿಳಿಸಿದ ಸಚಿವರು, ಈಗಿನ ಕೆಆರ್‌ಎಸ್‌ ಗೇಟ್‌ನ ಹೆಬ್ಬಾಗಿಲಿನಲ್ಲಿ ಆ ಅಡಿಗಲ್ಲು ಇನ್ನೂ ಕಾಣಸಿಗುತ್ತದೆ ಎಂದು ಹೇಳಿದ್ದಾರೆ. ಈ ಹೇಳಿಕೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮಹದೇವಪ್ಪ, ಟಿಪ್ಪು ಸುಲ್ತಾನ್ ಅವರ ಕೊಡುಗೆಗಳನ್ನು ಹಾಡಿ ಹೊಗಳಿದರು. “ಚರಿತ್ರೆಯನ್ನು ತಿಳಿದವರಿಗೆ ಮಾತ್ರ ಚರಿತ್ರೆಯನ್ನು ರಚಿಸಲು ಸಾಧ್ಯ” ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಸಚಿವರು, ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದಲ್ಲಿ ಸಮನ್ವಯತೆಯ ಜೀವನ ನಡೆಸಿದ್ದರು ಎಂದರು.

ಮಸೀದಿಯಿಂದ ಆಗುವ ಧ್ವನಿಯ ಜೊತೆಗೆ ದೇವಸ್ಥಾನದ ಗಂಟೆಯ ಸದ್ದನ್ನು ಸಹ ಟಿಪ್ಪು ಗೌರವದಿಂದ ಸ್ವೀಕರಿಸುತ್ತಿದ್ದರು ಎಂದು ಅವರು ವಿವರಿಸಿದರು. ಇದೇ ವೇಳೆ, ಟಿಪ್ಪು ಸುಲ್ತಾನ್ ಅವರು ದೇವದಾಸಿ ಪದ್ಧತಿಯನ್ನು ರದ್ದುಗೊಳಿಸಿದ್ದರು ಹಾಗೂ ತಮ್ಮ ಆಡಳಿತದಲ್ಲಿ ಒಂದಿಂಚು ಭೂಮಿಯನ್ನೂ ಶ್ರೀಮಂತರಿಗೆ ಒಪ್ಪಿಸಿರಲಿಲ್ಲ ಎಂದು ಸಚಿವರು ತಿಳಿಸಿದರು. ಜೊತೆಗೆ, ಭಾರತಕ್ಕೆ ರೇಷ್ಮೆ ಕೃಷಿಯನ್ನು ಪರಿಚಯಿಸಿದ ಕೀರ್ತಿಯೂ ಟಿಪ್ಪು ಅವರಿಗೆ ಸಲ್ಲುತ್ತದೆ ಎಂದರು.

ಬ್ರಿಟಿಷರ ವಿರುದ್ಧ ರಣರಂಗದಲ್ಲಿ ಹೋರಾಡಿದ ಟಿಪ್ಪು ಸುಲ್ತಾನ್ ಒಬ್ಬ ಮಹಾನ್ ಸ್ವಾತಂತ್ರ್ಯ ಸೇನಾನಿಯಾಗಿದ್ದರು ಎಂದು ಮಹದೇವಪ್ಪ ಶ್ಲಾಘಿಸಿದರು. ಕೆಆರ್‌ಎಸ್‌ ಅಣೆಕಟ್ಟು ಕಾವೇರಿ ನದಿಯ ಮೇಲೆ 1932ರಲ್ಲಿ ಪೂರ್ಣಗೊಂಡ ಒಂದು ಪ್ರಮುಖ ಯೋಜನೆಯಾಗಿದೆ. ಇದನ್ನು ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು. ಈ ಅಣೆಕಟ್ಟು ಮಂಡ್ಯ, ಮೈಸೂರು ಮತ್ತು ಬೆಂಗಳೂರು ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಇದರ ಜೊತೆಗಿರುವ ಬೃಂದಾವನ ಉದ್ಯಾನವು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿದೆ.

Leave a Comment