ಫೇಸ್ಬುಕ್… ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾದುದ್ದು. ಪ್ರತಿಯೊಬ್ಬ ಮೊಬೈಲ್ ಬಳಕೆದಾರ ಫೇಸ್ಬುಕ್ ಖಾತೆಯನ್ನು ಹೊಂದಿರುತ್ತಾನೆ. ಆದರೆ, ಫೇಸ್ಬುಕ್ನಲ್ಲಿ ಎಷ್ಟು ನಕಲಿ ಖಾತೆಗಳಿವೆ ಗೊತ್ತಾ!?
200 ಮಿಲಿಯನ್ಗೂ ಅಧಿಕ. ಅಂದರೆ, 20 ಕೋಟಿಗೂ ಹೆಚ್ಚು ನಕಲಿ ಫೇಸ್ಬುಕ್ ಖಾತೆಗಳಿವೆಯಂತೆ. ಇದನ್ನು ಫೇಸ್ಬುಕ್ ಸಂಸ್ಥೆಯೇ ಬಹಿರಂಗಪಡಿಸಿದೆ.
ಜಗತ್ತಿನದ್ಯಾಂತ 2017ರ ಡಿಸೆಂಬರ್ ಅಂತ್ಯದೊಳಗೆ 200 ಮಿಲಿಯನ್ ನಕಲಿ ಫೇಸ್ಬುಕ್ ಖಾತೆ ಪತ್ತೆಯಾಗಿವೆ. ಇದರಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗಿವೆ ಎಂದು ಫೇಸ್ಬುಕ್ ಹೇಳಿದೆ.
ಫೇಸ್ಬುಕ್ನ ಒಟ್ಟು ಖಾತೆಗಳ ಶೇ.10ರಷ್ಟು ಖಾತೆಗಳು ನಕಲಿಯಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೇ ಫೇಕ್ ಅಕೌಂಟ್ಗಳಿವೆ. ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್ನಂತ ರಾಷ್ಟ್ರಗಳು ಈ ಸಾಲಿನಲ್ಲಿವೆ.
2016ರ ಡಿಸೆಂಬರ್ನಲ್ಲಿ ಒಟ್ಟು 1.86 ಬಿಲಿಯನ್ ಖಾತೆಗಳಿದ್ದವು. ಆದರೆ, ಒಂದು ವರ್ಷದೊಳಗೆ ಶೇ.14ರಷ್ಟು ಖಾತೆಗಳು ಹೆಚ್ಚಾಗಿದ್ದು, 2017ರ ಡಿಸೆಂಬರ್ 31ರವರೆಗೆ ಖಾತೆಗಳ ಸಂಖ್ಯೆ 2.13 ಬಿಲಿಯನ್ ತಲುಪಿದೆ. ಈ ಅವಧಿಯಲ್ಲಿ ಹೆಚ್ಚು ಖಾತೆಗಳು ಸೃಷ್ಟಿಯಾಗಿರುವುದು ಭಾರತ, ಇಂಡೋನೇಷ್ಯಾ, ವಿಯೆಟ್ನಾಂ ರಾಷ್ಟ್ರಗಳಂತೆ.