ಪತ್ನಿ ನೀಡಿದ್ದ ವರದಕ್ಷಿಣೆ ಕಿರುಕುಳ ಹಾಗೂ ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ರಾಜೇಶ್ ವಿರುದ್ಧ 49 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ರಾಜೇಶ್ ವರದಕ್ಷಿಣೆ ಕಿರುಕುಳ ನೀಡುತ್ತಿರುವುದೂ ಅಲ್ಲದೇ ಬೇರೊಬ್ಬ ಹೆಣ್ಣು ಮಕ್ಕಳ ಜೊತೆ ಆಫೇರ್ ಗಳನ್ನು ಹೊಂದಿದ್ದಾರೆ. ಮದುವೆ ಆಗಿಲ್ಲ ಎಂದು ಹೆಣ್ಣು ಮಕ್ಕಳ ಸಲಹೆ ಬೆಳೆಸಿಕೊಂಡು ಮೋಸ ಮಾಡುತ್ತಿದ್ದಾರೆ ಎಂದು ಪತ್ನಿ ಶ್ರುತಿ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ರಾಜೇಶ್ ಕೂಡಾ ಪ್ರತಿದೂರು ಸಲ್ಲಿಸಿದ್ದು, ಪತ್ನಿ ಶ್ರುತಿ ಕುಡಿಯುವ ಅಭ್ಯಾಸ ಹೊಂದಿದ್ದು, ನನ್ನ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದಾರೆ.ಅವರಿಗೆ ಮತ್ತೊಂದು ಸಂಬಂಧ ಇದೆ ಎಂದು ಆರೋಪ ಮಾಡಿ ವೀಡಿಯೋ ಕೂಡ ಬಿಡುಗಡೆ ಮಾಡಿದ್ದರು.
ಶ್ರುತಿ ಹಾಗೂ ರಾಜೇಶ್ ಬಿಪಿಓ ಆಗಿ ಒಂದೆ ಕಡೆ ಮೊದಲು ಕೆಲಸ ಮಾಡುತ್ತಿದ್ದು, 2013ರಲ್ಲಿ ಪ್ರೀತಿಸಿ ರಿಜಿಸ್ಟರ್ ಮದುವೆ ಆಗಿದ್ದು, ಲಿವಿಂಗ್ ಟುಗೆದರ್ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದರು. ನಂತರದಲ್ಲಿ ರಾಜೇಶ್ ಧಾರವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆ ನಟನಾಗಿ ಗುರುತಿಸಿಕೊಂಡರು. ನಟನೆಗಾಗಿ ಕೆಲಸವನ್ನೂ ತ್ಯಜಿಸಿದರು.
ಧಾರವಾಹಿಗಳಲ್ಲಿ ನಟಿಸುವಾಗ ಹಲವು ಹುಡುಗಿಯರ ಜೊತೆ ರಾಜೇಶ್ ಪ್ರೀತಿಯ ನಾಟಕವಾಡಿದ್ದಾನೆ. ಈ ವಿಷಯ ತಿಳಿದ ಪತ್ನಿ ಜಗಳ ಶುರು ಮಾಡಿದ್ದಾರೆ. ಜಗಳ ಶುರು ಮಾಡುತ್ತಿದ್ದಂತೆ ಕೆಲಸಕ್ಕೆ ಹೋಗಿ ಸಂಬಳ ತಗೊಂಡು ಬಾ ಎಂದು ರಾಜೇಶ್ ದುಂಬಾಲು ಬಿದ್ದಿದ್ದಾನೆ. ಸಂಪ್ರದಾಯವಾಗಿ ಮದುವೆ ಆಗು ಎಂದಾಗ ಅದ್ದೂರಿಯಾಗಿ ಮದುವೆಗೆ ಬೇಡಿಕೆ ಇಟ್ಟಿದ್ದಾನೆ.
ಶ್ರುತಿ ಪೋಷಕರು ರಾಜೇಶ್ ಒತ್ತಾಯಕ್ಕೆ ಮಣಿದು 2017ರಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಅಂದಿನಿಂದ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಈ ದಂಪತಿ ಜೀವನ ಮಾಡಿಕೊಂಡಿದ್ದರು.
ಮದುವೆ ಸಂದರ್ಭದಲ್ಲಿ ವರೋಪಚಾರ ಸರಿ ಮಾಡಿಲ್ಲ ಎಂದು ಮತ್ತೆ ತಗಾದೆ ತೆಗೆದ ರಾಜೇಶ್ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಲ್ಲದೇ ಪ್ರತಿನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಶ್ರುತಿ ಮಾಡಿರುವ ಆರೋಪವನ್ನು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.